ಸುತ್ತುಒಡ್ಡುಗಳು
	ಭೂಮಿಯ ಮೇಲಿನ ವಕ್ರಾಕಾರದ ಇಲ್ಲವೆ ವೃತ್ತಾಕಾರದ ಶಿಲಾಒಡ್ಡುಗಳು (ರಿಂಗ್ ಡೈಕ್ಸ್). ಭೂನಕಾಸೆಯಲ್ಲಿ ಇವು ಅರ್ಧವೃತ್ತಾಕಾರ ಇಲ್ಲವೆ ಅರ್ಧಚಂದ್ರಾಕಾರ ಹಾಗೂ ಛಾಪಾಕಾರದಲ್ಲಿ ಕಂಡುಬರುತ್ತವೆ. ಕೆಲವು ಪ್ರದೇಶಗಳಲ್ಲಿ ಹಲವಾರು ಏಕಕೇಂದ್ರಿತ ಒಡ್ಡುಗಳು ಒಟ್ಟಿಗಿರುವುದೂ ಉಂಟು. ಇಂಥಲ್ಲಿ ಒಡ್ಡುಗಳ ನಡುವೆ ಇತರ ಶಿಲೆಗಳಿದ್ದು ಅವನ್ನು ಪರಸ್ಪರ ಬೇರ್ಪಡಿಸುತ್ತವೆ. ಹೀಗೆ ಬೇರ್ಪಟ್ಟ ಶಿಲಾಭಾಗಗಳಿಗೆ ಸ್ಕ್ರೀನ್‍ಗಳೆಂದು ಹೆಸರು. 

	ಸುತ್ತುಒಡ್ಡುಗಳು ಬಲು ಕಡಿದಾಗಿಯೂ ನೀಳವಾಗಿಯೂ ಇರುತ್ತವೆ. ಏಕಕೇಂದ್ರೀಯ ಸುತ್ತು ಒಡ್ಡುಗಳ ಸಮೂಹದ ವ್ಯಾಸ ಸಾಮಾನ್ಯವಾಗಿ ಸು. 3, 4.5 ಇಲ್ಲವೆ 6 ಕಿಮೀ ಇರುತ್ತವೆ. ಕೆಲವು ಚಿಕ್ಕ ಸಮೂಹಗಳ ವ್ಯಾಸ ಕೇವಲ 304 ಮೀ. ಬಲುದೊಡ್ಡ ಸಮೂಹಗಳ ವ್ಯಾಸ ಸು.24 ಕಿಮೀ. ಈ ಬಗೆಯ ಸಮೂಹದ ಒಡ್ಡುಗಳ ಅಗಲ ಸರ್ವೇಸಾಧಾರಣವಾಗಿ ಸು. 488 ಕಿಮೀ. ಕೆಲವೆಡೆ ಇದು ಸು. 4,267 ಮೀಗಳಿಗಿಂತಲೂ ಮಿಗಿಲು.

	ಸುತ್ತುಒಡ್ಡುಗಳ ಶಿಲೆ ಸಾಮಾನ್ಯವಾಗಿ ಸಮಕಣರಚನೆಯುಳ್ಳ, ಅಗ್ನಿಶಿಲಾವರ್ಗದ ಗ್ರ್ಯಾನೈಟ್, ಸಯನೈಟ್ ಜಾತಿಯದು. 

	ಅಮೆರಿಕದ ನ್ಯೂ ಹ್ಯಾಂಪ್‍ಷೈರ್, ಬ್ರಿಟನ್ನಿನ ಸ್ಕಾಟ್ಲೆಂಡ್, ನಾರ್ವೆಯ ಆಸ್ಲೋ, ಆಫ್ರಿಕದ ನೈಜೀರಿಯ ಮತ್ತು ಸುಡಾನ್ ಪ್ರದೇಶಗಳಲ್ಲಿ ಅನೇಕ ಸುತ್ತುಒಡ್ಡುಗಳು ಕಂಡುಬಂದಿವೆ.				
		(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ